Trade Media
     

ಮುನ್ನಾರ್


ಕೇರಳವು ವಿದೇಶಿ ಮತ್ತು ಇಲ್ಲಿನ ಪ್ರವಾಸಿಗರಿಗೆ ಜನಪ್ರಿಯ ಪ್ರವಾಸಿ ತಾಣವಾಗಿರಲು  ಇದು ಒಂದು ಪ್ರಮುಖ ಕಾರಣವಾಗಿದೆ. ಮೂರು ಸಣ್ಣ ನದಿಗಳಾದ ಮುತಿರಪುಜ, ನಲ್ಲತಣ್ಣಿ ಮತ್ತು ಕುಂಡಲಗಳು ಸಂಗಮವಾಗುವಲ್ಲಿರುವ, ಸಮುದ್ರ ಮಟ್ಟಕ್ಕಿಂತ 1600 ಮೀ ಎತ್ತರದಲ್ಲಿರುವ ಮುನ್ನಾರ್ ಗಿರಿಧಾಮವು ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಆಡಳಿತಗಾರರ ದಕ್ಷಿಣ ಭಾರತದ ಬೇಸಿಗೆ ಧಾಮವಾಗಿತ್ತು.

ಈ ಗಿರಿಧಾಮವು ವಿಸ್ತಾರವಾದ ಟೀ ಪ್ಲಾಂಟೇಶನ್‌ಗಳು, ವಸಾಹತುಶಾಹಿಯ ಬಂಗಲೆಗಳು, ತೊರೆಗಳು, ಜಲಪಾತಗಳು, ತಂಪಾದ ವಾತಾವರಣಗಳಿಂದ ಕೂಡಿದೆ. ಇದು ಟ್ರೆಕ್ಕಿಂಗ್ ಮತ್ತು ಬೆಟ್ಟದ ಬೈಕಿಂಗಿಗೆ ಪ್ರಶಸ್ತವಾದ ತಾಣವಾಗಿದೆ.

ಮುನ್ನಾರಿನ ಮನಸೂರೆಗೊಳ್ಳುವ ಗಿರಿಧಾಮವನ್ನು ಆನಂದಿಸಲು ಪ್ರವಾಸಿಗರಿಗೆ ಮುನ್ನಾರ್ ಮತ್ತು ಅದರ ಸುತ್ತಮುತ್ತ ಇರುವ ಅವಕಾಶಗಳು ಯಾವುವೆಂಬುದನ್ನು ನೋಡೋಣ.

ಎರವಿಕುಲಂ ರಾಷ್ಟ್ರೀಯ ಉದ್ಯಾನವನ
ಎರವಿಕುಲಂ ರಾಷ್ಟ್ರೀಯ ಉದ್ಯಾನವನ ಮುನ್ನಾರ್ ಮತ್ತು ಅದರ ಸುತ್ತಮುತ್ತಲಿನ ಮುಖ್ಯ ಆಕರ್ಷಣೆಗಳಲ್ಲೊಂದು. ಮುನ್ನಾರಿನಿಂದ 15 ಕಿ.ಮೀ ದೂರದಲ್ಲಿರುವ ಈ ಶಿಖರವು ವಿನಾಶದ ಅಂಚಿನಲ್ಲಿರುವ ನೀಲಗಿರಿ ಕಾಡೆಮ್ಮೆಗಳ ಆವಾಸಸ್ಥಾನವಾಗಿ ಪ್ರಸಿದ್ಧಿಯಾಗಿದೆ. 97 ಚದರ ಕಿ.ಮೀ ವಿಸ್ತಾರವಾದಈ ಶಿಖರವು ಇನ್ನೂ ಹಲವಾರು ಅಪರೂಪದ ಜಾತಿಯ ಚಿಟ್ಟೆಗಳು, ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಮನೆಯಾಗಿದೆ.ಚಾರಣಕ್ಕೆ [ಟ್ರೆಕ್ಕಿಂಗ್] ಅದ್ಭುತಸ್ಥಳವಾಗಿರುವ ಇದು ಮಂಜಿನಿಂದ ಆವೃತವಾದ ಬೆಟ್ಟಗಳು ಮತ್ತು ವಿಸ್ತಾರವಾದ ಟೀ ತೋಟಗಳ ಅದ್ದೂರಿಯಾದ ನೋಟವನ್ನು ಒದಗಿಸುತ್ತದೆ. ಈ ಬೆಟ್ಟಗಳು ನೀಲಕುರಿಂಜಿ ಹೂವುಗಳಿಂದ ಆವೃತವಾದಾಗ ಈ ಉದ್ಯಾನವನವು ಪ್ರವಾಸಿಗರಿಂದ ಕಿಕ್ಕಿರಿದಿರುತ್ತದೆ. ಪಶ್ಚಿಮಘಟ್ಟಗಳ ಈ ಭಾಗಕ್ಕೆ ಸ್ಥಾಳೀಯವಾದ ಈ ಗಿಡವು ಹನ್ನೆರಡು ವರ್ಷಗಳಿಗೊಮ್ಮೆ ಹೂಬಿಡುತ್ತದೆ. ಹಿಂದೆ ಇದು 2006 ನೆಯ ಇಸವಿಯಲ್ಲಿ ಹೂಬಿಟ್ಟಿತ್ತು.

ಅನಮುಡಿ ಶಿಖರ
ಎರವಿಕುಲಂ ರಾಷ್ಟ್ರೀಯ ಉದ್ಯಾನವನದಲ್ಲಿರುವ ಅನಮುಡಿ ಶಿಖರವು 2700 ಮೀ ಎತ್ತರವಿದ್ದು ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಎತ್ತರವಿರುವ ಶಿಖರವಾಗಿದೆ. ಎರವಿಕುಲಂನಲ್ಲಿರುವ ಅರಣ್ಯ ಮತ್ತು ವನ್ಯಜೀವಿಗಳ ಇಲಾಖೆಯ ಅಧಿಕಾರಿಗಳ ಅನುಮತಿಯನ್ನು ಪಡೆದು ಈ ಶಿಖರಕ್ಕೆ ಟ್ರೆಕ್ ಮಾಡಬಹುದು.
   
ಮಟ್ಟುಪೆಟ್ಟಿ
ಮುನ್ನಾರಿನಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಮಟ್ಟುಪೆಟ್ಟಿಯು ಮತ್ತೊಂದು ಆಕರ್ಷಣೆಯ ಸ್ಥಳವಾಗಿದೆ. ಸಮುದ್ರಮಟ್ಟದಿಂದ 1700 ಮೀ ಎತ್ತರದಲ್ಲಿರುವ ಮಟ್ಟುಪೆಟ್ಟಿಯಲ್ಲಿರುವ ಗಾರೆಯಿಂದ ನಿರ್ಮಿಸಲಾಗಿರುವ ಅಣೆಕಟ್ಟು ಮತ್ತು ಆನಂದಕರ ದೋಣಿವಿಹಾರಕ್ಕೆ ಅವಕಾಶ ಮಾಡಿಕೊಟ್ಟು ಸುತ್ತಲಿನ ಭೂಚಿತ್ರವನ್ನು ನೋಡಿ ಸಂತೋಷಿಸುವ ಅವಕಾಶವನ್ನು ಕೊಡುವ ಮನೋಹರವಾದ ಕೊಳದಿಂದ ಪ್ರಸಿದ್ಧಿಯಾಗಿದೆ. ಮಟ್ಟುಪೆಟ್ಟಿಯ ಕೀರ್ತಿಯು ಅಲ್ಲಿರುವ ಭಾರತ-ಸ್ವಿಸ್ ಪಶುಸಂಗೋಪನ ಯೋಜನೆಯು ಅಭಿವೃದ್ಧಿಪಡಿಸುತ್ತಿರುವ ಹೆಚ್ಚು ಹಾಲು ಕರೆಯುವ ಹಸುಗಳಿಂದ ಬಂದಿರುತ್ತದೆ. ಟ್ರೆಕ್ಕಿಂಗಿಗೆ ಹೇಳಿ ಮಾಡಿಸಿದಂತಿರುವ ಮಟ್ಟುಪೆಟ್ಟಿಯು ತನ್ನ ಹಚ್ಚಹಸುರಿನ ಟೀ ತೋಟಗಳು, ತೊನೆದಾಡುವ ಹುಲ್ಲುಗಾವಲುಗಳು ಮತ್ತು ಹಲವಾರು ಪಕ್ಷಿಗಳಿಗೆ ಆಶ್ರಯ ಕೊಟ್ಟಿರುವ ಶೋಲಾ ಅರಣ್ಯಗಳನ್ನು ಹೊಂದಿರುತ್ತದೆ.

ಪಳ್ಳಿವಾಸಲ್
ಕೇರಳದ ಮೊದಲ ಜಲವಿದ್ಯುತ್ ಯೋಜನೆಯನ್ನು ಚಿತ್ರಪುರಂನಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಪಳ್ಳಿವಾಸಲ್‌ನಲ್ಲಿ ಪ್ರಾರಂಭಿಸಲಾಯಿತು. ಇದು ಅತ್ಯಂತ ಸುಂದರ ನೋಟವನ್ನು ಹೊಂದಿದ್ದು ಪ್ರವಾಸಿಗರಿಗೆ ಇದು ಮೆಚ್ಚಿನ ವಿಹಾರಪ್ರವಾಸದ ತಾಣವಾಗಿದೆ.

ಚಿನ್ನಕನಲ್
ಮುನ್ನಾರ್ ಪಟ್ಟಣದ ಬಳಿಯಿರುವ ಪವರ್ ಹೌಸ್ ಜಲಪಾತಗಳೆಂದು ಪ್ರಸಿದ್ಧವಾಗಿರುವ ಚಿನ್ನಕನಲ್‌ನ ಜಲಪಾತಗಳು ಸಮುದ್ರಮಟ್ಟದಿಂದ 2000 ಮೀ ಎತ್ತರದ ಕಡಿದಾದ ಕಲ್ಲಿನ ಪ್ರಪಾತದಲ್ಲಿ ಬೀಳುತ್ತವೆ. ಇಲ್ಲಿಂದ ಪಶ್ಚಿಮ ಘಟ್ಟಗಳ ಸುಂದರ ದೃಶ್ಯವು ಕಂಡುಬರುತ್ತದೆ.

ಅನಯಿರಂಗಲ್
ಚಿನ್ನಕನಲಿನಿಂದ ನೀವು ಸುಮಾರು ಏಳು ಕಿ.ಮೀ ಪ್ರಯಾಣ ಮಾಡಿದ ನಂತರ ನಿಮಗೆ ಅನಯಿರಂಗಲ್ ಸಿಕ್ಕುತ್ತದೆ. ಮುನ್ನಾರಿನಿಂದ 22 ಕಿ.ಮೀ ದೂರದಲ್ಲಿರುವ ಅನಯಿರಂಗಲ್ ಟೀಗಿಡಗಳ ನೆಲಹಾಸನ್ನು ಹೊಂದಿರುತ್ತದೆ. ಅದ್ಭುತವಾದ ಜಲಾಶಯದ ಭೇಟಿಯು ನಿಮಗೆ ಮರೆಯಲಾಗದ ಅನುಭವವಾಗುತ್ತದೆ. ಅನಯಿರಂಗಲ್ ಅಣೆಕಟ್ಟು ಟೀತೋಟಗಳು ಮತ್ತು ನಿತ್ಯಹರಿದ್ವರ್ಣದ ಕಾಡುಗಳಿಂದ ಆವೃತವಾಗಿದೆ.

ಟಾಪ್ ಸ್ಟೇಶನ್
ಟಾಪ್ ಸ್ಟೇಶನ್ ಮುನ್ನಾರಿನಿಂದ 3 ಕಿ.ಮೀ ದೂರದಲ್ಲಿದ್ದು ಸಮುದ್ರ ಮಟ್ಟದಿಂದ 1700 ಮೀ ಎತ್ತರದಲ್ಲಿದೆ. ಮುನ್ನಾರ್ – ಕೊಡೈಕೆನಾಲ್ ರಸ್ತೆಯಲ್ಲಿ ಇದು ಅತಿ ಎತ್ತರದ ತಾಣವಾಗಿರುತ್ತದೆ. ಇದು ನೆರೆರಾಜ್ಯವಾದ ತಮಿಳುನಾಡಿನ ವಿಹಂಗಮ ನೋಟವನ್ನು ಕೊಡುವುದರಿಂದ ಪ್ರವಾಸಿಗರು ಟಾಪ್ ಸ್ಟೇಶನ್ನಿಗೆ ತಪ್ಪದೇ ಭೇಟಿ ಕೊಡುತ್ತಾರೆ. ವಿಶಾಲವಾದ ಪ್ರದೇಶದಲ್ಲಿ ನೀಲಕುರುಂಜಿ ಹೂವುಗಳು ಅರಳಿದಾಗ ಅದನ್ನು ನೋಡಿ ಆನಂದಿಸುವ ತಾಣಗಳಲ್ಲಿ  ಒಂದು.

ಟೀ ಸಂಗ್ರಹಾಲಯ
ಟೀ ತೋಟಗಳ ಮೂಲ ಹಾಗೂ ಅದರ ವಿಕಾಸದ ವಿಷಯದಲ್ಲಿ ಮುನ್ನಾರಿಗೆ ಅದರದೇ ಆದ ಪರಂಪರೆಯಿದೆ. ಈ ಪರಂಪರೆಯನ್ನು ಗಣನೆಗೆ ತೆಗೆದುಕೊಂಡು ಕೇರಳದ ಎತ್ತರದ ಬೆಟ್ಟ ಗುಡ್ಡಗಳ ಶ್ರೇಣಿಯಲ್ಲಿ ಟೀ ತೋಟಗಳ ಉಗಮ ಮತ್ತು ಬೆಳವಣಿಗೆಯ  ಕೆಲವು ಅಂಶಗಳನ್ನು ಸುರಕ್ಷಿತವಾಗಿಡಲು ಮುನ್ನಾರಿನ ಟಾಟಾ ಟೀ ಸಂಸ್ಥೆಯು ಒಂದು ಸಂಗ್ರಹಾಲಯವನ್ನು ಇದಕ್ಕಾಗಿಯೇ ತೆರೆಯಿತು. ಈ ಟೀ ಸಂಗ್ರಹಾಲಯದಲ್ಲಿ ಮುನ್ನಾರಿನ ಟೀ ತೋಟಗಳ ಮೂಲ ಹಾಗೂ ಬೆಳವಣಿಗೆಯ ಕಥೆಯನ್ನು ಹೇಳುವ ಅಪರೂಪದ ವಸ್ತುಗಳು, ಛಾಯಾಚಿತ್ರಗಳು ಮತ್ತು ಯಂತ್ರೋಪಕರಣಗಳನ್ನು ಸಂಗ್ರಹಿಸಿಡಲಾಗಿದೆ. ಈ ವಸ್ತು ಸಂಗ್ರಹಾಲಯವು ಟಾಟಾ ಟೀ ಕಂಪನಿಯ ಮುನ್ನಾರಿನ ನಲ್ಲತಣ್ಣಿ ತೋದಲ್ಲಿದ್ದು ಇಲ್ಲಿಗೆ ಭೇಟಿ ನೀಡುವುದು ಅಪೇಕ್ಷಣೀಯವಾಗಿರುತ್ತದೆ.

ಅಲ್ಲಿಗೆ ತಲಪುವ ರೀತಿ:
  • ಸಮೀಪದ ರೈಲು ನಿಲ್ದಾಣ: ಸುಮಾರು  60 ಕಿ.ಮೀ ದೂರದಲ್ಲಿರುವ ಥೇನಿ (ತಮಿಳುನಾಡು); ಮತ್ತು ಸುಮಾರು  93 ಕಿ.ಮೀ ದೂರದಲ್ಲಿರುವ ಚಂಗನಚೆರಿ.
  • ಸಮೀಪದ ವಿಮಾನ ನಿಲ್ದಾಣ: 140 ಕಿ.ಮೀ ದೂರದಲ್ಲಿರುವ ಮಧುರೈ (ತಮಿಳುನಾಡು); ಸುಮಾರು  190 ಕಿ.ಮೀ ದೂರದಲ್ಲಿರುವ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.


 
 
Photos
Photos
information
Souvenirs
 
     
Department of Tourism, Government of Kerala,
Park View, Thiruvananthapuram, Kerala, India - 695 033
Phone: +91-471-2321132 Fax: +91-471-2322279.

Tourist Information toll free No:1-800-425-4747
Tourist Alert Service No:9846300100
Email: info@keralatourism.org, deptour@keralatourism.org

All rights reserved © Kerala Tourism 1998. Copyright Terms of Use
Designed by Stark Communications, Hari & Das Design.
Developed & Maintained by Invis Multimedia