ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ತಿರುವನಂತಪುರಂ

 

ಭಾರತದಲ್ಲಿ ಇರುವ ಕೇರಳ ರಾಜ್ಯದ ರಾಜಧಾನಿಯಾಗಿರುವ ತಿರುವನಂತಪುರಮ್‌ ನಲ್ಲಿರುವ ಪೂರ್ವದ ಕೋಟೆಯ ಒಳಗೆ ಇರುವ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನವು ವಿಷ್ಣು ದೇವರಿಗೆ ಸಮರ್ಪಿತವಾಗಿದೆ. ಈ ದೇವಸ್ಥಾನವು ಕೇರಳ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪದ ಸಮ್ಮಿಲನವಾಗಿದೆ. ಇದನ್ನು ಪ್ರಪಂಚದ ಅತ್ಯಂತ ಶ್ರೀಮಂತ ದೇವಸ್ಥಾನ ಎಂದು ನಂಬಲಾಗಿದೆ.

ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಇತಿಹಾಸವು 8ನೇ ಶತಮಾನದ ಕಾಲಕ್ಕೆ ಸೇರಿದೆ. ಇದು ಭಾರತದಲ್ಲಿರುವ ವಿಷ್ಣುವಿಗೆ ಸಮರ್ಪಿಸಲಾದ ದೇವಾಲಯಗಳಲ್ಲಿ ಅಥವಾ ದಿವ್ಯ ದೇಸಮ್‌ಗಳಲ್ಲಿ ಒಂದಾಗಿದೆ. ದಿವ್ಯ ದೇಸಮ್‌ಗಳೆಂದರೆ ವಿಷ್ಣು ದೇವರ ಪವಿತ್ರ ನೆಲೆಬೀಡುಗಳಾಗಿದ್ದು ಅವುಗಳನ್ನು ತಮಿಳು ಅಝ್ವರ್‌ಗಳ (ಸಂತರ) ಕೆಲಸಗಳಲ್ಲಿ ನಮೂದಿಸಲಾಗಿದೆ. ಈ ದೇವಸ್ಥಾನದ ಪ್ರಮುಖ ದೇವತೆ ಸರ್ಪದ ಮೇಲೆ ಒರಗಿದ ಮಲಗಿರುವ ಅನಂತ, ವಿಷ್ಣು ದೇವರಾಗಿದ್ದಾರೆ.

ತಿರುವಾಂಕುರ್ ರಾಜರಲ್ಲಿ ಸುಪ್ರಸಿದ್ಧ ರಾಜರಲ್ಲಿ ಒಬ್ಬನಾಗಿದ್ದ ಮಾರ್ತಾಂಡ ವರ್ಮ, ಈ ದೇವಸ್ಥಾನದ ಪ್ರಮುಖ ನವೀಕರಣ ಕೆಲಸವನ್ನು ಮಾಡಿಸಿದನು ಮತ್ತು ಇದರ ಪರಿಣಾಮವೇ ಇಂದಿನ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ವಾಸ್ತುಶಿಲ್ಪವಾಗಿದೆ. ದೇವಸ್ಥಾನದಲ್ಲಿ ಮುರಾಜಪಮ್ ಮತ್ತು ಭದ್ರ ದೀಪಮ್ ಎಂಬ ಹಬ್ಬಗಳನ್ನು ಮಾರ್ತಾಂಡ ವರ್ಮನೇ ಪರಿಚಯಿಸಿದನು. ಮುರಾಜಪಮ್ ಇದರ ಅರ್ಥವೇನೆಂದರೆ ನಿರಂತರವಾಗಿ ಪ್ರಾರ್ಥನೆಗಳನ್ನು ಸಲ್ಲಿಸುವುದಾಗಿದೆ, ಇದನ್ನು ಪ್ರತಿ ಆರು ವರ್ಷಗಳಿಗೊಮ್ಮೆ ದೇವಸ್ಥಾನದಲ್ಲಿ ಇಂದಿಗೂ ಮುಂದುವರೆಸಿಕೊಂಡು ಬರಲಾಗುತ್ತಿದೆ.

1750ರಲ್ಲಿ ಮಾರ್ತಾಂಡ ವರ್ಮನು ತಿರುವಾಂಕುರ್ ಸಾಮ್ರಾಜ್ಯವನ್ನು ಪಧ್ಮನಾಭ ದೇವರಿಗೆ ಮೀಸಲಾಗಿರಿಸಿದನು. ಮಾರ್ತಾಂಡ ವರ್ಮನು ರಾಜ ಮನೆತನದವರು ದೇವರ ಪರವಾಗಿ ರಾಜ್ಯವನ್ನು ಆಳುವವರು ಎಂದು ನಂಬಿದ್ದನು ಮತ್ತು ಅವನ ಮತ್ತು ಅವನ ಸಂತತಿಯವರು ಪದ್ಮನಾಭನ ದಾಸರೆಂದು ಅಥವಾ ಪದ್ಮನಾಭ ದೇವರ ಸೇವಕರೆಂದು ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದರು. ಇದರ ನಂತರದಲ್ಲಿ ಪ್ರತಿಯೊಬ್ಬ ತಿರುವಾಂಕೂರ್ ರಾಜನ ಹೆಸರು ಪದ್ಮನಾಭ ದಾಸ ಎಂಬ ಶೀರ್ಷಿಕೆಯಲ್ಲಿಯೇ ಕರೆಯಲಾಗುತ್ತಿತ್ತು. ತಿರುವಾಂಕುರ್ ಸಾಮ್ರಾಜ್ಯವು ಪದ್ಮನಾಭಸ್ವಾಮಿಗೆ ನೀಡುವ ದಾನ-ದತ್ತಿಗಳು ತ್ರಿಪದಿದಾನಮ್ ಎಂದು ಜನಪ್ರಿಯವಾಗಿವೆ.

ತಿರುವನಂತಪುರಮ್ ಕೇರಳದ ರಾಜಧಾನಿಯಾಗಿದ್ದು ಇದು ತನ್ನ ಹೆಸರನ್ನು ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಅತ್ಯಂತ ಪವಿತ್ರವಾದ ದೈವೀಗುಣದಿಂದ ಪಡೆದುಕೊಂಡಿದೆ, ಇವರು ಅನಂತ (ಅನಂತ ಸರ್ಪದ ಮೇಲೆ ಒರಗಿರುವ ದೇವತೆ) ಎಂದು ಸಹ ಜನಪ್ರಿಯವಾಗಿದ್ದಾರೆ. ’ತಿರುವನಂತಪುರಮ್’ ಎಂಬ ಪದದ ಅರ್ಥವೇನೆಂದರೆ – ಶ್ರೀ ಅನಂತ ಪದ್ಮನಾಭಸ್ವಾಮಿಯ ದೇವರು ಎಂದರ್ಥ.

ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ಏಳು ಪರಶುರಾಮ ಕ್ಷೇತ್ರಗಳಲ್ಲಿ ಒಂದಾಗಿರುವ ಪ್ರದೇಶವಾಗಿದೆ ಎಂದು ನಂಬಲಾಗಿರುವ ಪ್ರದೇಶದಲ್ಲಿದೆ. ಈ ದೇವಸ್ಥಾನಕ್ಕೆ ಸ್ಕಂದ ಪುರಾಣ ಮತ್ತು ಪದ್ಮ ಪುರಾಣ ಎಂಬ ಪುರಾಣಗಳ ಪಠ್ಯಗಳಲ್ಲಿ ಉಲ್ಲೇಖವಾಗಿದೆ. ಈ ದೇವಸ್ಥಾನವು ’ಕಮಲ ತೀರ್ಥ’ ಎಂಬ ಅರ್ಥವನ್ನು ಹೊಂದಿರುವ ಪದ್ಮ ತೀರ್ಥಮ್ ಎಂಬ ಪವಿತ್ರವಾದ ಕೆರೆಯ ಸಮೀಪದಲ್ಲಿದೆ.

ಈ ಪವಿತ್ರ ಕ್ಷೇತ್ರವನ್ನು ಪ್ರಸ್ತುತ ತಿರುವಾಂಕುರ್‌ನ ಹಿಂದಿನ ರಾಜ ಮನೆತನದವರು  ಮುಖ್ಯಸ್ಥರಾಗಿರುವ ಒಂದು ಟ್ರಸ್ಟ ಮುನ್ನಡೆಸಿಕೊಂಡು ಬರುತ್ತಿದೆ.

ಪ್ರತಿಮೆ

ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ದೇವತೆಯ ಪುರಾತನವಾದ ಪ್ರತಿಮೆಯು ತನ್ನ ರಚನೆಗೆ ಹೆಸರುವಾಸಿಯಾಗಿದೆ, ಇದು 12008 ಸಾಲಿಗ್ರಾಮಗಳನ್ನು ಹೊಂದಿದ್ದು, ಅವುಗಳನ್ನು ಗಂಧಕಿ ನದಿಯ ದಡದಿಂದ ತೆಗೆಯಲಾಗಿದ್ದು, ನೇಪಾಲದಿಂದ ತರಿಸಲಾಗಿದೆ. ಗರ್ಭಗುಡಿ ಅಥವಾ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಪವಿತ್ರ ಸ್ಥಳವು ಕಲ್ಲಿನ ಮೇಲ್ಚಾವಣಿಯ ಮೇಲೆ ನೆಲೆಯಾಗಿದೆ ಮತ್ತು ಮುಖ್ಯವಾದ ಪ್ರತಿಮೆಯು ಸುಮಾರು 18 ಅಡಿ ಉದ್ದದ್ದಾಗಿದ್ದು ಇದನ್ನು ಮೂರು ವಿಭಿನ್ನ ಬಾಗಿಲುಗಳಿಂದ ನೋಡಬಹುದಾಗಿದೆ. ಮೊದಲನೆಯ ಬಾಗಿಲಿನಿಂದ ತಲೆ ಮತ್ತು ಎದೆಯ ಭಾಗವನ್ನು ನೋಡಬಹುದು; ಹಾಗೆಯೇ ಎರಡನೆಯ ಬಾಗಿಲಿನ ಮೂಲಕ ಕೈಗಳನ್ನು ಮತ್ತು ಮೂರನೆಯ ಬಾಗಿಲಿನ ಮೂಲಕ ಕಾಲುಗಳನ್ನು ವೀಕ್ಷಿಸಬಹುದು.

ಅಲಂಕಾರಗಳು ಮತ್ತು ವಾಸ್ತುಶಿಲ್ಪ

ದೇವಸ್ಥಾನದ ವಾಸ್ತುಶಿಲ್ಪವು ತನ್ನ ಕಲ್ಲಿನ ಮತ್ತು ಕಂಚಿನ ಕೆಲಸಗಳಿಗೆ ಪ್ರಸಿದ್ಧವಾಗಿದೆ. ದೇವಸ್ಥಾನದ ಒಳಭಾಗವು ಸುಂದರ ಪೈಂಟಿಂಗ್‌ಗಳು ಮತ್ತು ಭಿತ್ತಿಚಿತ್ರಗಳಿಂದ ತುಂಬಿದೆ. ಅವುಗಳಲ್ಲಿ ಬೃಹತ್ ಗಾತ್ರದ ವಿಷ್ಣು ದೇವರು ನರಸಿಂಹ ಸ್ವಾಮಿ (ಮಹಾ ವಿಷ್ಣುವಿನ ಅರ್ಧ ಸಿಂಹ ಮತ್ತು ಅರ್ಧ ಮನುಷ್ಯನ ರೂಪ), ಮಹಾ ಗಣಪತಿ ಮತ್ತು ಗಜ ಲಕ್ಷ್ಮೀ ಚಿತ್ರಗಳೂ ಸೇರಿವೆ. ದೇವಸ್ಥಾನವು ಧ್ವಜ ಸ್ಥಂಬ (ಫ್ಲಾಗ್ ಪೋಸ್ಟ್) ಹೊಂದಿದ್ದು, ಇದು ಸುಮಾರು 80 ಅಡಿ ಎತ್ತರವಿದೆ ಮತ್ತು ಇದು ಬಂಗಾರ ಲೇಪಿತ ತಾಮ್ರದ ತಗಡುಗಳಿಂದ ಸುತ್ತಲ್ಪಟ್ಟಿದೆ. ದೇವಸ್ಥಾನವು ಇನ್ನೂ ಕೆಲವು ಆಸಕ್ತಿದಾಯಕ ವಿನ್ಯಾಸದ ಲಕ್ಷಣಗಳನ್ನು ಬಲಿ ಪೀಠ ಮಂಟಪ ಮತ್ತು ಮುಖ ಮಂಟಪದ ರೂಪದಲ್ಲಿ ಹೊಂದಿದೆ. ಇವುಗಳು ಹಾಲ್ ಆಗಿದ್ದು, ಇವುಗಳಲ್ಲಿ ವಿವಿಧ ಹಿಂದೂ ದೇವತೆಗಳ ಸುಂದರ ಚಿತ್ರಗಳೊಂದಿಗೆ ಅಲಂಕಾರ ಮಾಡಲಾಗಿದೆ. ಇಲ್ಲಿ ಆಕರ್ಷಕವಾಗಿ ಮನ ಸೆಳೆಯುವ ಇನ್ನೊಂದು ವಿನ್ಯಾಸ ಯಾವುದೆಂದರೆ ನವಗ್ರಹ ಮಂಟಪವಾಗಿದೆ, ಇದು ನವಗ್ರಹಗಳನ್ನು (ಒಂಬತ್ತು ಗ್ರಹಗಳು) ಪ್ರದರ್ಶಿಸುತ್ತದೆ.

ಮೊಗಸಾಲೆ

ಪೂರ್ವ ಭಾಗದಿಂದ ವಿಸ್ತರಿಸಿ ಪವಿತ್ರವಾದ ಗರ್ಭಗುಡಿಯ ಒಳಗೆ ಇರುವ ವಿಶಾಲವಾದ ಮೊಗಸಾಲೆಯು 365 ಸ್ಥಂಭಗಳನ್ನು ಹೊಂದಿದೆ ಮತ್ತು ಇದರಲ್ಲಿ ಕಾಲು ಭಾಗವು ಸುಂದರವಾದ ಗ್ರಾನೈಟ್ ಕಲ್ಲಿನ ಕೆತ್ತನೆಯನ್ನು ಹೊಂದಿದೆ. ಪೂರ್ವ ಭಾಗದಲ್ಲಿನ ಪ್ರಮುಖ ದ್ವಾರದ ಕೆಳಭಾಗದ ನೆಲ ಮಾಳಿಗೆ ಇದೆ, ಇದು ನಾಟಕ ಸಾಲಾ (ಇದರ ಅರ್ಥ ನಾಟಕ ಶಾಲೆ) ಎಂದೇ ಜನಪ್ರಿಯವಾಗಿದೆ, ಇಲ್ಲಿ ಕೇರಳದ ಸಾಂಪ್ರದಾಯಿಕ ಕಲೆಯ ರೂಪವಾಗಿರುವ ಕಥಕ್ಕಳಿಯನ್ನು ದೇವಸ್ಥಾನದಲ್ಲಿ ವರ್ಷದ ಹತ್ತನೆಯ ದಿನ ಪ್ರದರ್ಶಿಸಲಾಗುತ್ತದೆ, ಇದನ್ನು ಮೀನಮ್ ಮತ್ತು ತುಲಂ ಎಂಬ ಮಲೆಯಾಳಂ ತಿಂಗಳುಗಳಲ್ಲಿ ಆಚರಣೆ ಮಾಡಲಾಗುತ್ತದೆ.

ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಆರಾಧನೆ ಮಾಡಲಾಗುವ ಸಮಯ

ಮುಂಜಾನೆಯ ಅವಧಿ: ಮುಂಜಾನೆ 3:30 ಯಿಂದ ಮುಂಜಾನೆ 04:45 ವರೆಗೆ (ನಿರ್ಮಲ್ಯ ದರ್ಶನಮ್) ಮುಂಜಾನೆ 06:30 ಯಿಂದ ಮುಂಜಾನೆ 07:00 ವರೆಗೆ ಮುಂಜಾನೆ 8.30 ಯಿಂದ ಮುಂಜಾನೆ 10:00 ವರೆಗೆ ಮುಂಜಾನೆ 10:30 ಯಿಂದ ಮುಂಜಾನೆ 11:10 ವರೆಗೆ ಮುಂಜಾನೆ 11:45 ಯಿಂದ ಮಧ್ಯಾಹ್ನ 12:00 ವರೆಗೆ ಸಂಜೆಯ ಅವಧಿ: ಸಂಜೆ 5:00 ದಿಂದ ಸಂಜೆ 06:15. ಸಂಜೆ 6:45 ದಿಂದ ಸಂಜೆ 07:20.

ದೇವಸ್ಥಾನದ ಆರಾಧನೆಯ ಸಮಯಗಳು ಹಬ್ಬದ ಸಂದರ್ಭದಲ್ಲಿ ಬದಲಾವಣೆಯಾಗುತ್ತವೆ ಎಂಬುದನ್ನು ನೆನಪಿನಲ್ಲಿಡಿ.

ದೇವಸ್ಥಾನದಲ್ಲಿ ಪಾಲಿಸಬೇಕಾದ ಉಡುಪೊತ್ತಾಯ

ದೇವಸ್ಥಾನದ ಒಳಗೆ ಕೇವಲ ಹಿಂದುಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ಇದೆ. ದೇವಸ್ಥಾನವನ್ನು ಪ್ರವೇಶಿಸುವಾಗ ಉಡುಪೊತ್ತಾಯವನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವಿದೆ. ಪುರುಷರು ಮುಂಡು ಅಥವಾ ಧೋತಿ (ಸೊಂಟದ ಸುತ್ತಲೂ ಮತ್ತು ಹಿಮ್ಮಡಿಯ ಮೇಲ್ಭಾಗದ ವರೆಗೆ ಧರಿಸಿರಬೇಕು) ಮತ್ತು ಯಾವುದೇ ರೀತಿಯ ಶರ್ಟ್ ಅನ್ನು ಧರಿಸುವ ಅಗತ್ಯವಿಲ್ಲ. ಮಹಿಳೆಯರು ಸೀರೆ, ಮುಂಡುಮ್ ನೆರಿಯತಮ್ (ಮುಂಡು-ಸೆಟ್), ಸ್ಕರ್ಟ್ ಮತ್ತು ಬ್ಲೌಸ್, ಅಥವಾ ದಾವಣಿಯನ್ನು ಧರಿಸುವ ಅಗತ್ಯವಿದೆ. ದೇವಸ್ಥಾನದ ಎದುರಿನಲ್ಲಿ ಧೋತಿಗಳು ಬಾಡಿಗೆಗೆ ಸಿಗುತ್ತವೆ. ಇತ್ತೀಚಿನ ದಿನಗಳಲ್ಲಿ ದೇವಸ್ಥಾನದ ಪ್ರಾಧಿಕಾರದವರು ಭಕ್ತಾಧಿಗಳಿಗೆ ಅನಾನುಕೂಲವಾಗುವುದನ್ನು ತಡೆಯಲು ಪ್ಯಾಂಟಿನ ಅಥವಾ ಚೂಡಿದಾರ್ ಮೇಲೆ ಧೋತಿ ಧರಿಸಲು ಅವಕಾಶ ನೀಡಿದ್ದಾರೆ. ಹೆಚ್ಚಿನ ವಿವರಗಳಿಗಾಗಿ www.sreepadmanabhaswamytemple.org ಗೆ ಲಾಗ್ ಆನ್ ಆಗಿರಿ

ಇಲ್ಲಿಗೆ ತಲುಪುವುದು

ಸಮೀಪದ ರೈಲು ನಿಲ್ದಾಣ: ವರ್ಕಲಾ, ತಿರುವನಂತಪುರಮ್ ಸೆಂಟ್ರಲ್ 1 ಕಿ.ಮೀ ದೂರದಲ್ಲಿದೆ ಹತ್ತಿರದ ಏರ್‌ಪೋರ್ಟ್: ತಿರುವನಂತಪುರಮ್ ಅಂತರಾಷ್ಟ್ರೀಯ ಏರ್‌ಪೋರ್ಟ್, ಸುಮಾರು 6 ಕಿ.ಮೀ. ದೂರದಲ್ಲಿದೆ

ಸ್ಥಳ

ಅಕ್ಷಾಂಶ : 8.483026, ರೇಖಾಂಶ : 76.943563

ಮ್ಯಾಪ್

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close